Thursday, May 21, 2020


ಉಳಿದು  ಬೆಳೆಯಬೇಕಾದರೆ  ನಿಯಮಗಳನ್ನು     ಪಾಲಿಸಲೇಬೇಕು.

             ಕೋವಿಡ್ 19 ಎಂಬ ಸಾಂಕ್ರಾಮಿಕ ರೋಗ ಬರುತ್ತದೆ ಎಂದು ಯಾರು  ತಾನೇ ಉಯಿಸಿಕೊಂಡಿದ್ದರು ಹೇಳಿ? ಈ ಜಗತ್ತಿನ ಜನರು ಕಲ್ಪನೆಯನ್ನು ಮಾಡಿಕೊಂಡಿದ್ದಿಲ್ಲ. ವಿಶ್ವದ ಜನರಿಗೆ ಹಾಗೂ ಸಾಮಾಜಿಕ ಜೀವನಕ್ಕೆ ಬಂದೊದಗಿದ ಸಂಕಷ್ಟಕ್ಕೆ ಜನರ ವೈಯಕ್ತಿಕ ಜೀವನದಲ್ಲಿ, ಸಾಮಾಜಿಕ ಜೀವನದಲ್ಲಿ ನೀರಿಕ್ಷಿಸದಷ್ಠು ಕಷ್ಟಗಳು, ತೊಂದರೆಗಳು ಉಂಟಾಗಿವೆ. ಇಂಥ ಪರಿಸ್ಥಿತಿಯಲ್ಲಿ ವಿಶ್ವದ ಜನರು ತಮ್ಮ ದೈನಂದಿನ ಜೀವನದಲ್ಲಿ ಒಂದಿಷ್ಟು ಹೊಸ ನಿಯಮಗಳನ್ನು ರೂಡಿಸಿಕೊಂಡು, ಪಾಲಿಸಿ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಇತಿಮಿತಿಯಲ್ಲಿ ಬದುಕಬೇಕಾದ ಪರಿಸ್ಥಿತಿ ಬಂದಿದೆ.

      ಬಹುಸಂಸ್ಕೃತಿಯ ಜನರಿರುವ ಭಾರತ ದೇಶದಲ್ಲಿ ಜನರು ತಮ್ಮ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿಯೇ ಇರಬೇಕಾಗಿದೆ. ಹಾಗೂ ಹೋಸ ಜೀವನ ಶೈಲಿಯನ್ನು ಅಳವಡಿಸಿಕೊಂಡು ಕೌಟುಂಬಿಕವಾಗಿ ಪ್ರೀತಿ,ಸ್ನೇಹ,ವಿಶ್ವಾಸದಿಂದ ಹಾಗೂ ಸಾಮಾಜಿಕವಾಗಿ ಪರಸ್ಪರ ಸಹಕಾರದಿಂದ ಒಂದಿಷ್ಟು ಆತಂಕ ಹಾಗೂ ನೆಮ್ಮದಿಯ ಸಂತೃಪ್ತಿಯ ಜೀವನವನ್ನು ನಡೆಸುತ್ತಿದ್ದಾರೆ..ನಿರೀಕ್ಷಿತವಾಗಿ ಬಂದ ಸಾಂಕ್ರಾಮಿಕ ರೋಗ ಜನರಲ್ಲ ಜನರ ಜಿವನಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ತಂದಿದೆ ಎಂದೇ ಹೇಳಬಹುದು.

     ಬದಲಾದ ಪರಿಸ್ಥಿತಿಯಲ್ಲಿ ಜನರು ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

    ರೋಗಕ್ಕೆ ಹೆದರಿ ವೈಯಕ್ತಿಕ ಶುಚಿತ್ವ, ಹಾಗೂ ಕೌಟುಂಬಿಕ ಸುಚಿತ್ವದ ಕಡೆ ಗಮನ ನೀಡುತ್ತಿದ್ದಾರೆ. ಕುಟುಂಬ ಸದಸ್ಯರಲ್ಲಿ ಶುಚಿತ್ವ ಕಾಪಾಡಿಕೊಳ್ಳಲೇಬೆಕಾದ  ಅವಶ್ಯಕತೆಯ ಬಗ್ಗೆ ತಿಳಿಸಿಹೇಳುತ್ತಿದ್ದಾರೆ.

    ಅನಗತ್ಯವಾಗಿ  ಬೇರೆ ಊರುಗಳಿಗೆ ಪ್ರಯಾಣ ಮಾಡುವುದನ್ನುನಿಲ್ಲಿಸಿದ್ದಾರೆ. ಸಾಮಾಜಿಕವಾಗಿ ಈ ಮೊದಲು  ವ್ಯವಹರಿಸುತ್ತಿದ್ದ ಪ್ರಮಾಣವನ್ನು ಕಡಿಮೆ ಮಾಡಿ ಕಂಡುಕೊಂಡಿದ್ದಾರೆ.

  ಕುಟುಂಬದ ಹಿರಿಯರು,ಯುವಕರು,ಚಿಕ್ಕ ಮಕ್ಕಳು ಮನೆಯಂಗಳದಲ್ಲಿಯೇ ಸಂತೋಷವನ್ನು ಹುಡುಕುವ ಪ್ರಸಂಗ ಬಂದಿದೆ.

     70 ಹಾಗೂ 80 ದಶಕದಲ್ಲಿ ಇದ್ದ ಗ್ರಾಮೀಣ ಜೀವನದ ಸ್ವಾವಲಂಬಿ, ಹಾಗೂ ಪರಸ್ಪರ ಸಹಕಾರಿ ತತ್ವದ ಜೀವನಶೈಲಿಯ  ಬದುಕು ವಿಕೆಯ  ನೆನಪನ್ನು ಮತ್ತೆ  ನೆನಪಿಸುವಂತೆ ಮಾಡಿದೆ.

      ಮೊದಲು ಸಾಮಾಜಿಕವಾಗಿ ಅವಿಭಕ್ತ ಕುಟುಂಬಗಳು ಹೆಚ್ಚು ಇರುತ್ತಿದ್ದವು. ಕುಟುಂಬದಲ್ಲಿ ತಂದೆ- ತಾಯಿ, ಅಣ್ಣ- ತಮ್ಮ, ಅಕ್ಕ- ತಂಗಿ, ಚಿಕ್ಕಮ್ಮ- ದೊಡ್ಡಮ್ಮ, ಮಕ್ಕಳು -ಮೊಮ್ಮಕ್ಕಳು ,ಅತ್ತಿಗೆ ನಾದಿನಿ, ಹೀಗೆ ಅನೇಕ ಕೌಟುಂಬಿಕ ಸಂಬಂಧಗಳು ಪರಸ್ಪರವಾಗಿ ಸಕಾರಾತ್ಮಕವಾಗಿ, ಸೌಹಾರ್ದಯುತವಾಗಿ  ಇದ್ದವು. ಆದರೆ ಬದಲಾದ ಕೌಟುಂಬಿಕ ವ್ಯವಸ್ಥೆಯಲ್ಲಿಇಂತಹ ಸಂಬಂಧಗಳು ಕಾಣೆಯಾಗಿವೆ. ಇವತ್ತಿನ ದಿನಗಳಲ್ಲಿ ಮತ್ತೆ ಸಂಬಂಧಗಳ ಪರಿಚಯವಾಗುತ್ತಿದೆ, ಹಾಗೂ ಮೊದಲಿನ ಹಾಗೆಯೇ ಚಿಗುರೊಡೆದುಕೊಂಡಿವೆ.

   ಎಲ್ಲ ಕುಟುಂಬದ ಸದಸ್ಯರು  ಮನೆಯಲ್ಲಿಯೇ ಇರುವುದರಿಂದ ಅವರಿಗೆ ಮೂರು ಅವಧಿಯ ಊಟ ಉಪಹಾರಗಳನ್ನು ಮಾಡಬೇಕಾದ ಮಹಿಳೆಯರು ಇಂದು ಲಾಕ್ಡೌನ್ ಸಂದರ್ಭದಲ್ಲಿ ಹೊಸ ಹೊಸ ಅಡುಗೆಗಳನ್ನು  ಮಾಡಿ  ಬಡಿಸುತ್ತಿದ್ದಾರೆ.

    ಶಾಲಾ ಕಾಲೇಜು ಮಕ್ಕಳು ಮನೆಯಲ್ಲಿದ್ದುಕೊಂಡು ಯೂಟ್ಯೂಬ್ ಗಳನ್ನು ಬಳಸಿಕೊಂಡು ಹೊಸ ಹೊಸ ಅಡುಗೆಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

       ಮನೆಯಲ್ಲಿರುವ ಮಕ್ಕಳಲ್ಲಿ ಒಳಾಂಗಣ ಆಟಗಳಾದ ಚೆಸ್,ಕೆರಮ್,ಪಗಡೆಯಾಟ,ಚೌಕಾಬಾರ,ಹುಲಿಮನೆ ಮುಂತಾದ ಆಟಗಳನ್ನು ಆಡುತ್ತಿದ್ದಾರೆ. ಮಕ್ಕಳಲ್ಲಿ ಒಂದಿಷ್ಟು  ಹೊಸ ಕೌಶಲ್ಯಗಳ  ಕಲಿಕೆ  ಸಾಧ್ಯವಾಗಿದೆ.

     ಮನುಷ್ಯ ಮೂಲತಃ ಮಹತ್ವಕಾಂಕ್ಷಿ ಜೀವಿಯಾಗಿದ್ದಾನೆ. ಸಾಧಿಸಬೇಕು ಸ್ಪರ್ಧಾತ್ಮಕವಾಗಿ ಬದುಕಬೇಕು ಅಂದುಕೊಂಡಿದ್ದನ್ನು ಕಾಲಮಿತಿಯಲ್ಲಿಯೇ ಗುರಿಮುಟ್ಠಬೇಕು  ಎಂಬ ಮನುಷ್ಯನ ಅತಿಯಾದ ಮಹತ್ವಕಾಂಕ್ಷೆ ಮನುಷ್ಯ ಜೀವನವನ್ನು ಜೀವನ ಶೈಲಿಯನ್ನು ಬಹಳಷ್ಟು  ವೇಗವಾಗಿಸಿದೆ .ಈ ತರಹದ ಜೀವನಶೈಲಿ ಮನುಷ್ಯನಲ್ಲಿ ಭಯ, ಆತಂಕ,ಉದ್ವೇಗದ ಅನಾರೋಗ್ಯಕರ ಜೀವನ ವಿಧಾನದಲ್ಲಿ ಅನಿವಾರ್ಯವಾಗಿ ಬದುಕುವ ಪರಿಸ್ಥಿತಿಯನ್ನು ತಂದಿದೆ. ನಾವೆಲ್ಲ ಇಂದು ಅನೇಕ ಒತ್ತಡಗಳ ನಡುವೆ ಬದುಕುತ್ತಿದ್ದೇವೆ. ಒತ್ತಡಗಳ ಜೀವನಶೈಲಿ ಮಕ್ಕಳು ಮದ್ಯಮ  ವಯಸಿನವರಿಂದ  ಹಿಡಿದು ಹಿರಿಯರಲ್ಲಿ  ಸ್ವಾಭಾವಿಕವಾಗಿದೆ. ಇದರ ಪರಿಣಾಮ  ಮನುಷ್ಯನಲ್ಲಿ ಸಹನೆ, ತಾಳ್ಮೆ, ಸುಖಶಾಂತಿ ,ಪರಸ್ಪರನ್ನು ವಿಚಾರಿಸುವ ಹಾಗೂ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ, ಸುಖದುಃಖಗಳಲ್ಲಿ ಭಾಗಿಯಾಗುವ ವ್ಯವಧಾನವನ್ನು ಕಳೆದುಕೊಂಡಿದ್ದೇವೆ. ಆದರೆ ಕೊವಿಡ್ 19 ಸಾಂಕ್ರಾಮಿಕ ರೊಗವು ಈಗ ವಿಶ್ವದ ಜನರಿಗೆ ಕಿವಿಮಾತು ಹೇಳುತ್ತಿದೆ, ಹೇ ಮಾನವ ನೀನು  ವೇಗವಾಗಿ ಓಡಬೇಡ ಒಂದಿಷ್ಟು ನಿಂತುಕೋ, ತಾಳ್ಮೆವಹಿಸುಕೊಂಡು ಈ ಜಗತ್ತಿನ  ಜನರೊಂದಿಗೆ   ವ್ಯವಹರಿಸು ಹೇಳಿದಂತಿದೆ.

    ಭಾರತೀಯ ಜನರಿಗೆ ಕಷ್ಟಗಳನ್ನು ಸಹಿಸಿಕೊಂಡು ಜೀವನ ನಡೆಸುವ ಕಲೆ ಗೊತ್ತಿದೆ. ಭಾರತ ಮೂಲತಹ ಗ್ರಾಮೀಣ ಕೃಷಿ ಪ್ರಧಾನ ದೇಶವಾಗಿದೆ.ಗ್ರಾಮಿಣ ಜೀವನದಲ್ಲಿ ಜನರು ಪರಸ್ಪರ ಸಾಂಘಿಕ ಜೀವನವನ್ನುನೆಡೆಸುವುದು ಸ್ವಾಭಾವಿಕ.ಇಂಥ  ರೈತರಿಗೆ, ಕೂಲಿಕಾರ್ಮಿಕರಿಗೆ  ಜೀವನ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವುಗಳನ್ನ ರೂಢಿಸಿಕೊಳ್ಳುವುದು ಅವರಿಗೆ ಕಷ್ಟಸಾಧ್ಯವಾಗಿದೆ. ಕೊರತೆಯ ಜೀವನವಿದ್ದರೂ ಕೊಡು-ಕೊಳ್ಳುವಿಕೆಯಲ್ಲಿಯೇ ಖುಷಿಪಡುವ ನಮ್ಮಜನರು ವ್ಯಕ್ತಿಗತ ಅಂತರವನ್ನು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ.

 ಇಂಥ ಪ್ರಸಂಗದಲ್ಲಿ  ಹುಟ್ಟು ಸಹಜ ಸಾವು ಅನಿರೀಕ್ಷಿತ, ಎಂಬಂತೆ ಯಾವುದೇ ಪ್ರಸಂಗದಲ್ಲಿಯೂ ಸಾವು ಬಂದೇ ಬಿಡಬಹುದು, ಜೀವನ ನೀರ ಮೇಲಿನ ಗುಳ್ಳೆಯಂತೆನಾವೊಂದು ಬಗೆದರೆ ದೈವವೊಂದು ಬಗೆದಂತೆ, ಎಂಬ ಗಾದೆ ಮಾತುಗಳು ನೆನಪಿನಲ್ಲಿ ಬರುತ್ತಿವೆ.

     ಮನುಷ್ಯನ ತೀವ್ರ ಮಹತ್ವಾಕಾಂಕ್ಷೆಗಳ  ನಡುವೆಯೂ, ಪ್ರಾಕೃತಿಕ ವೈರುಧ್ಯಗಳಿಗೆ, ವೈಪರಿತ್ಯಗಳಿಗೆ ಸಿಲುಕಿಕೊಂಡಾಗ  ಅಲ್ಲಿ ಬಂದೊದಗುವ ಸಂಕಷ್ಟಗಳಿಗೆ  ಎಲ್ಲರೂ ಸಮಾನರು. ಎಲ್ಲರೂ ಪ್ರಕೃತಿಯ ನಿಯಮಗಳಿಗೆ ತಲೆಬಾಗಲೇಬೇಕು. ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಪಾಲಿಸಿದರೆ ಮಾತ್ರ ಜೀವನ. ಇಲ್ಲದಿದ್ದರೆ ಸಾವು ಖಚಿತ.
 ಸಂಕಷ್ಟದ ಸ್ಥಿತಿಯಲ್ಲಿ ಮನುಷ್ಯನಲ್ಲಿ ತಾಳ್ಮೆ, ವ್ಯವಧಾನ, ವಿವೇಚನೆ, ವಿಮರ್ಶೆಗಳನ್ನು  ಮಾಡಿಕೊಳ್ಳಬೇಕಾದ, ಸಮಯವಾಗಿದೆ.

     ಸಾಂಕ್ರಾಮಿಕ ರೋಗ ವಲಸೆ ಕಾರ್ಮಿಕರನ್ನು ಬಹಳ ವರ್ಷಗಳ ನಂತರ ಸ್ವಗ್ರಾಮಕ್ಕೆ ಮರಳುವಂತೆ ಮಾಡಿದೆ. ಅವರಿಗೆ ವರ್ತಮಾನದಲ್ಲಿ ಬಹಳಷ್ಟು ಕಷ್ಟಗಳು, ಭವಿಷ್ಯದ ಬಗ್ಗೆ ಆತಂಕ ಮೂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೋಗದ ವಿರುದ್ಧ ಹೋರಾಟ,ರೋಗದ ನಿಯಂತ್ರಣ,ಹಾಗೂ ಸಾಮಾಜಿಕವಾಗಿ ಕಾನೂನು  ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಗರಿಷ್ಠ ಪ್ರಮಾಣದ ಪ್ರಯತ್ನ ಮಾಡುತ್ತಿದೆ. ಜೊತೆಗೆ ಕೂಲಿ ಕಾರ್ಮಿಕರ, ಅಸಂಘಟಿತ ವ್ಯಾಪಾರಿ ಜನರ  ಹಾಗೂ ಉಪಕಸುಬುಗಳನ್ನು   ನಂಬಿ ಬದುಕುತ್ತಿರುವ ಜನರ ಬದುಕನ್ನು ರೂಪಿಸಲು ಅನೇಕ  ಪರಿಹಾರಗಳನ್ನು ನೀಡುತ್ತಿದೆ. ದೇಶದ ಇಂಥ ಸಂಕಷ್ಟ ಸ್ಥಿತಿ ಆಡಳಿತ ನಡೆಸುತ್ತಿರುವ ಸರ್ಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

      ರೋಗವು ಬಹಳಷ್ಠು ಸಂಕಷ್ಟ ಸಮಸ್ಯೆಗಳನ್ನು ತಂದಿದೆ .ಆದರೆ ರೋಗಕ್ಕೆ  ಅಂಜಿ ಕುಳಿತುಕೊಂಡರೆ ಮನುಷ್ಯನಿಗೆ  ಭವಿಷ್ಯವಿಲ್ಲ, ದೇಶಕ್ಕೆ ಭವಿಷ್ಯವಿಲ್ಲ.ವಾಸ್ತವದ ನಡುವಯೇ ಸತ್ಯ ಎದ್ದು ಕಾಣುತ್ತಿದೆ. ನಾವೆಲ್ಲ ಇಂದು ರೋಗದ ನಡುವೆಯೇ ಬದುಕಬೇಕು, ವ್ಯವಹರಿಸಬೇಕು ಅದಕ್ಕಾಗಿ ಬದುಕಿನ ಶೈಲಿಯಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲೇಬೇಕಾಗಿದೆ.

    ಭಾರತ ಒಂದು ಬೃಹತ್ ದೇಶ ಇಲ್ಲಿ ಎಲ್ಲವೂ ಬೃಹತ್ ಪ್ರಮಾಣದಲ್ಲಿಯೇ ನಡೆಯುತ್ತದೆ. ಮದುವೆ, ಮುಷ್ಕರ, ಸಂತೆ, ಉತ್ಸವ, ಜಾತ್ರೆ, ಮೆರವಣಿಗೆ, ಶಾಲೆ-ಕಾಲೇಜುಗಳಲ್ಲಿ ಕಲಿಕೆ,ಬೃಹತ್ ಪ್ರಮಾಣದ ಸಾಮೂಹಿಕ ಸೇರ್ಪಡೆಗಳು  ಸ್ವಾಭಾವಿಕ ವಾಗಿದ್ದವು.

  ಆದರೆ  ಜನರ ಬೃಹತ್ ಸೇರ್ಪಡೆ, ಪ್ರಸ್ತುತ ದಿನಗಳಲ್ಲಿ ಅಸಾಧ್ಯವಾದದ್ದು ಹಾಗೂ ಇಂತಹ ಪ್ರಯತ್ನಗಳನ್ನು ಕೈಬಿಟ್ಟು    ಇರುವ ವ್ಯವಸ್ಥೆಯಲ್ಲಿ ಸೀಮಿತ ಪ್ರದೇಶಗಳಲ್ಲಿ ಸಣ್ಣ ಸಣ್ಣ ಗುಂಪುಗಳಾಗಿ ವಿಘಟನೆಗೊಂಡು ಬದುಕಬೇಕಾದ, ವ್ಯವಹರಿಸಬೇಕಾದ ಅನಿವಾರ್ಯತೆ ಬಂದಿದೆ.

   ಭಾರತ ದೇಶದಲ್ಲಿ 60 ದಿನಗಳ  ಲಾಕ್ಡೌನ್  ಮುಗಿದಿದೆ. ಒಂದು ವಿಮರ್ಶೆ ಮಾಡಿಕೊಳ್ಳೊಣ ಎಷ್ಟು ದಿನಗಳ ಕಾಲ ಆರ್ಥಿಕ ಚಟುವಟಿಕೆಗಳು ಇಲ್ಲದೇ, ಶೈಕ್ಷಣಿಕ ಕಲಿಕೆ ಇಲ್ಲದೇ, ಜೀವನಕ್ಕೆ ದುಡಿಮೆಯ  ಆಧಾಯದ ಚಟುವಟಿಕೆಗಳು ಇಲ್ಲದೇ ಜನಸಾಮಾನ್ಯರು ಬದುಕಲು ಸಾಧ್ಯವಾಗುತ್ತದೆ. ಹೀಗೆ ಪರಿಸ್ಥಿತಿ ಮುಂದುವರೆದರೆ ದೇಶದ  ಹಾಗೂ ಜನರ ಆರ್ಥಿಕ ಪರಿಸ್ಥಿತಿ ಅದೋಗತಿ ಯನ್ನು ಪಡೆದುಕೊಳ್ಳುತ್ತದೆ ಭಾರತ ದೇಶ ಸೋಲಬಾರದು ಇಲ್ಲಿರುವ ಜನ ಸೋಲಬಾರದು.  ಸಾಂಕ್ರಾಮಿಕ ರೋಗವು ಜನರಲ್ಲಿ ಸೋಲುವ ಭಯವನ್ನು ಹುಟ್ಟಿಸಬಾರದು.ಬಂದೊದಗುವ ಹೊಸ ಸವಾಲುಗಳು ಮನುಷ್ಯನಲ್ಲಿ ಹೊಸ ನೋಟವನ್ನು, ಹೊಸ ಆಲೋಚನೆಗಳನ್ನು, ಹೊಸ ಕೌಶಲ್ಯಗಳನ್ನು ಹಾಗೂ ಹೊಸ ಜೀವನ ವಿಧಾನಗಳನ್ನು ಅಳವಡಿಸಿಕೊಂಡು ಬದುಕುವ ಆತ್ಮವಿಶ್ವಾಸ ಮತ್ತು ಭರವಸೆ ಮೂಡಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ  ಹೇಳಿದಂತೆ  ರೋಗವು ನಮ್ಮನ್ನು ಬಿಟ್ಟು ಬಹುಬೇಗ ಹೋಗುವುದಿಲ್ಲ ನಮ್ಮ ನಡುವೆ ಇರುತ್ತದೆ.

   ಇದಕ್ಕೆ ಸೂಕ್ತವಾದ ಉತ್ತರವನ್ನು ಕೊಡಬೇಕಾದರೆ ಮನುಷ್ಯನ ಸಾಮಾಜಿಕ ಜೀವನ, ವೈಯಕ್ತಿಕ ಜೀವನದಲ್ಲಿ  ವ್ಯಕ್ತಿ ಅಂತರಗಳನ್ನು ಕಾಪಾಡಿಕೊಳ್ಳಬೇಕುನೈರ್ಮಲ್ಯ ಮತ್ತು ಶುಚಿತ್ವದ ಜೀವನ ನಡೆಸಬೇಕು. ನಾವೆಲ್ಲರೂ ಬದಲಾದ ಪರಿಸ್ಥಿತಿಯಲ್ಲಿ ಹೊಸ ನಿಯಮಗಳನ್ನು  ಪಾಲಿಸೋಣ ಅಂದಾಗ ಮಾತ್ರ ದೇಶ ಹಾಗೂ ದೇಶದ ಜನರ ಬದುಕನ್ನ ಕಟ್ಟಿಕೊಳ್ಳಬಹುದು ಅನಿಸುತ್ತದೆ.  ನಾವೆಲ್ಲರೂ ಸಂಕಲ್ಪ ಮಾಡೋಣ ಉಳಿದು ಬೆಳೆಯಬೇಕಾದರೆ ನಿಯಮಗಳನ್ನು ಪಾಲಿಸೋಣ.

                                                                                     ಮಹೇಶ ಶೆಟ್ಟರ .ಶಿಕ್ಷಕರು                                                                                                                                     

No comments:

Post a Comment